ಬೆಳಗಾವಿ : ಮಹಾರಾಷ್ಟ್ರ ರಾಜ್ಯದಲ್ಲಿಯೂ ತೀವ್ರ ನೀರಿನ ಅಭಾವ ಉಂಟಾಗಿರುವುದರಿಂದ ಅಲ್ಲಿಂದ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡುವುದು ಕಷ್ಟಕರವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮಾತ್ರವಲ್ಲದೆ ಹಿಂದಿನ ವರ್ಷಗಳಲ್ಲಿಯೂ ರಾಜ್ಯ ಸರ್ಕಾರ ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ದೊರೆತಿಲ್ಲ ಎಂದು ಹೇಳಿದರು.
ಕೊಯ್ನಾ ಜಲಾಶಯ ಭರ್ತಿಯಾಗಿದ್ದ ಸಂದರ್ಭಗಳಲ್ಲಿಯೂ ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡಲು ಮುಂದಾಗಿರಲಿಲ್ಲ ಎಂದು ತಿಳಿಸಿದರು.
ಪ್ರಸ್ತುತ ಮಹಾರಾಷ್ಟ್ರದಲ್ಲಿಯೂ ನೀರಿನ ಕೊರತೆ ಎದುರಾಗಿದ್ದು, ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಈಗಾಗಲೇ ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಹೇಳಿದರು.
ಎರಡು ತಿಂಗಳಿಗೆ ಸಾಕಾಗುವಷ್ಟು ನೀರಿನ ಸಂಗ್ರಹ
ಬೆಳಗಾವಿ ನಗರದಲ್ಲಿ ಮುಂದಿನ ಎರಡು ತಿಂಗಳಿಗೆ ಸಾಕಾಗುವಷ್ಟು ಕುಡಿಯುವ ನೀರಿನ ಸಂಗ್ರಹ ಲಭ್ಯವಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದರು.
ನೀರಿನ ಕೊರತೆ ಎದುರಾಗುವ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುವಂತೆ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.


