ಬೆಂಗಳೂರು: ರಾಜ್ಯದ 4 ಸಾರಿಗೆ ನಿಗಮಗಳ ನೌಕರರ ಮೂಲ ವೇತನದಲ್ಲಿ ಶೇ. 12.50 ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
KSRTC, BMTC, KKRTC, NWKRTC ಸಾರಿಗೆ ಸಂಸ್ಥೆಗಳ ನೌಕರರ ದೀರ್ಘಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು ವೇತನ ಹೆಚ್ಚಳ ಮಾಡಿದೆ.
2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲಾಗಿದೆ.ಮಾರ್ಚ್ 31, 2025ರ ಅಂತ್ಯಕ್ಕೆ ನೌಕರರು ಪಡೆಯುತ್ತಿದ್ದ ಮೂಲವೇತನಕ್ಕೆ ಈ ಹೆಚ್ಚಳ ಅನ್ವಯವಾಗಲಿದ್ದು, ಪರಿಷ್ಕೃತ ವೇತನ ಶ್ರೇಣಿಯು ಮಾರ್ಚ್ 31, 2029 ರವರೆಗೆ ಜಾರಿಯಲ್ಲಿರುತ್ತದೆ.
ವೇತನ ಹೆಚ್ಚಳದ ಹಣ ಜುಲೈ 1, 2026 ರಿಂದ ನೌಕರರ ಮಾಸಿಕ ವೇತನದೊಂದಿಗೆ ಪಾವತಿಸಲಾಗುವುದು. ಏಪ್ರಿಲ್ 1, 2025ರಿಂದ ಜೂನ್ 30, 2026ರವರೆಗಿನ 15 ತಿಂಗಳ ಹಿಂಬಾಕಿಯನ್ನು ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಹೇಳಲಾಗಿದೆ.
ಈ ವೇತನ ಹೆಚ್ಚಳದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು 72.80 ಕೋಟಿ ರೂ., ವಾರ್ಷಿಕ 873.64 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಒಟ್ಟು 1.05 ಲಕ್ಷ ಸಿಬ್ಬಂದಿಗೆ ವೇತನ ಹೆಚ್ಚಳ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

