ಬೆಳಗಾವಿ: ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಆಕೆಯ ಪತಿ ಹಾಗೂ ಆತನ ಸ್ನೇಹಿತ ಸೇರಿ ಭೀಕರವಾಗಿ ಕೊಲೆ(Murder) ಮಾಡಿರುವ ಘಟನೆ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.
ಬಾಬು ಭೂಸಗೋಳ (35) ಕೊಲೆಯಾದ ದುರ್ದೈವಿ. ಆರೋಪಿಗಳು ಬಾಬು ಅವರ ತಲೆಗೆ ಕಲ್ಲಿನಿಂದ ಜಜ್ಜಿ ಹಾಗೂ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಗೆ ಅನೈತಿಕ ಸಂಬಂಧ, ರಸ್ತೆ ವಿವಾದದ ಶಂಕೆ
ಕೊಲೆಯಾದ ಬಾಬು ಭೂಸಗೋಳ ಅವರು ಆರೋಪಿಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಇದರ ಜೊತೆಗೆ, ಅವರು ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಿ ರಸ್ತೆ ಬಂದ್ ಮಾಡಿದ್ದರು ಎನ್ನಲಾಗಿದೆ.
ಬಾಬು ಅವರ ಈ ದರ್ಪ ಮತ್ತು ಆಟಾಟೋಪಕ್ಕೆ ಬೇಸತ್ತು ಪತಿ ಹಾಗೂ ಆತನ ಸ್ನೇಹಿತ ಸೇರಿಕೊಂಡು ಈ ಸ್ಕೆಚ್ ಹಾಕಿ ಮುಗಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸಂಕೇಶ್ವರ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


