ಬೆಂಗಳೂರು : ಶೂಟಿಂಗ್ ನಡೆಯುವಾಗ, ಸಿನಿಮಾ ಕಾರ್ಯಕ್ರಮಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಟಿಯರ ಅಸಭ್ಯ ಚಿತ್ರ, ವೀಡಿಯೋ ತೆಗೆಯುವ ಪಾಪರಾಜಿಗಳ ವಿರುದ್ಧ ಇತ್ತೀಚೆಗೆ ನಟಿ ಸಪ್ತಮಿ ಗೌಡ ಕಿಡಿಕಾರಿದ್ದರು. ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ಬೆಂಬಲಕ್ಕೆ ನಿಂತಿದೆ.
ಈ ರೀತಿ ಅಸಭ್ಯ ಭಂಗಿಯ ಫೋಟೋ, ವೀಡಿಯೋ ಮಾಡಿದರೆ ಸೈಬರ್ ಕ್ರೈಮ್‌ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ನಟಿ ಸಪ್ತಮಿ ಗೌಡ, ಮಾಳವಿಕಾ ಅವಿನಾಶ್, ಶ್ರುತಿ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಜಯಮಾಲಾ, ‘ಇನ್ನು ಮುಂದೆ ಇಂಥಾ ಘಟನೆ ಮರುಕಳಿಸಬಾರದು.
ಸಿನಿಮಾ ಈವೆಂಟ್‌ಗಳಲ್ಲಿ ನಟಿಯರ ಅಸಭ್ಯ ಚಿತ್ರ ತೆಗೆದರೆ ಅದಕ್ಕೆ ಪಿಆರ್‌ಓಗಳು ಕಾರಣವಾಗುತ್ತಾರೆ. ಫೋಟೋ ತೆಗೆದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.




